ಸಮಾಜದ ಸ್ವರೂಪವನ್ನು ವಿಮರ್ಶೆಗೆ ಒಳಪಡಿಸಿದ ಕನ್ನಡಕಥಾ ಸಾಹಿತ್ಯವು ಮಾನವನ ವಿಕಾಸ, ಕೌಟುಂಬಿಕ ಪಲ್ಲಟ, ಹೆಣ್ಣು ಗಂಡುಗಳ ಸಂಬಂಧ ಹಾಗೂ ಸಮಾಜದ ರಚನೆಯ ಹಿಂದಿನ ಮೌಲ್ಯಗಳನ್ನು ಪರಂಪರೆ ಎಂದು ನಂಬಿಕೊಂಡು ಬರುವ ಕಾಲಮಾನದಲ್ಲಿ ಹೆಣ್ಣಿನ ಸಂವೇದನೆಯನ್ನು ಪುರುಷ ಕೇಂದ್ರಿತ ಸಾಮಾಜಿಕ ವ್ಯವಸ್ಥೆಯಲ್ಲಿಯೇ ಕಟ್ಟುವ ಕಾರ್ಯವನ್ನು ಬಹುತೇಕ ಕನ್ನಡದ ಕತೆಗಾರ್ತಿಯರು ಮಾಡಿದ್ದಾರೆ. ನವ್ಯ ಕಥಾ ಸಾಹಿತ್ಯದ ಮಹತ್ವದ ಕತೆಗಾರ್ತಿ ಎನಿಸುವ ವೀಣಾಶಾಂತೇಶ್ವರ ತಮ್ಮ ಕತೆಗಳಲ್ಲಿ ಗಂಡು, ಹೆಣ್ಣುಗಳ ಮಾನಸಿಕ ನೆಲೆಯನ್ನು ಸಾಮಾಜಿಕ ವ್ಯವಸ್ಥೆಯಿಂದ ಶೋಧನೆಗೆ ಒಳಪಡಿಸುವುದರ ಜೊತೆಯಲ್ಲಿ ಪುರುಷನು ಸಾಮಾಜಿಕ ಮೌಲ್ಯವೆಂದು, ಹೆಣ್ಣಿನ ನೆಲೆಯಲ್ಲಿ ರೂಪಿಸಿರುವ ಸಂಪ್ರದಾಯ, ಜೀವನ ಮೌಲ್ಯ, ಮಡಿವಂತಿಕೆ, ಸಭ್ಯತೆಯಂತಹ ನೀತಿ, ನಿಯಮಗಳನ್ನು ಮೀರುವ ಮೂಲಕ ಸ್ತ್ರೀಗೆ ಅಸ್ಮಿತೆಯನ್ನು ರೂಪಿಸುತ್ತಾರೆ. ವೀಣಾಶಾಂತೇಶ್ವರ ಅವರ ‘ಕೊನೆಯದಾರಿ’ ಕತೆಯು ಸಾಮಾಜಿಕವಾಗಿ ಚಲನೆಯಲ್ಲಿ ಇರುವ ಸಾಂಪ್ರದಾಯಿಕ ರೀತಿ, ನೀತಿಗಳನ್ನು ಸ್ತ್ರೀಯೊಬ್ಬಳು ಮೀರುವ ಮೂಲಕ ತನ್ನ ಸ್ವಂತಿಕೆಯನ್ನು ಕಾಪಾಡಿಕೊಂಡು ಬದುಕಿನ ಆಯ್ಕೆಗಳನ್ನು ತಾನೇ ನಿರ್ಧರಿಸುವ ಬಗೆಯು ಹೆಣ್ಣು ಗಂಡುಗಳ ಆಕರ್ಷಣೆ ಹಾಗೂ ವಿಕರ್ಷಣೆಗಳು ಸಾಮಾಜಿಕ ಭಿತ್ತಿಯನ್ನು ಕೂಡಿಕೊಂಡು ನಡೆಯುತ್ತದೆ. ಲೀಲಾ ತಾನು ಮದುವೆಯಾದ ಗಂಡ ಕುಡುಕ, ತನ್ನನ್ನು ಕ್ರೂರವಾಗಿ ಹಿಂಸಿಸಿದ ಎಂಬ ಕಾರಣಕ್ಕಾಗಿ ಗಂಡನನ್ನು ಬಿಟ್ಟು ಸ್ವತಃ ಉದ್ಯೋಗವನ್ನು ಆರ...