Skip to main content

ಎಸ್ ಸಿಡಿಸಿಸಿ ಬ್ಯಾಂಕ್ ಗೆ 2021 ಮಾರ್ಚ್ ಅಂತ್ಯಕ್ಕೆ 33.65 ಕೋಟಿ ಲಾಭ: ಡಾ. ರಾಜೇಂದ್ರ ಕುಮಾರ್

 




ಮಂಗಳೂರು(reporterkarnataka news): ಅಭಿವೃದ್ಧಿಯ ಹರಿಕಾರ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಎಸ್‌ಸಿಡಿಸಿಸಿ ಬ್ಯಾಂಕ್)ಬ್ಯಾಂಕಿಂಗ್ ಸೇವೆಯಲ್ಲಿ ದೇಶಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ೨೦೨೧ರ ಮಾ.೩೧ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ೩೩.೬೫ ಕೋಟಿ ರೂ. ಲಾಭ ಗಳಿಸಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

೧೦೭ ವರ್ಷಗಳ ಸಾರ್ಥಕ ಸೇವೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೀಡುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ ವರದಿ ವರ್ಷದಲ್ಲಿ ಅಮೋಘ ಸಾಧನೆ ಮಾಡಿದೆ. ಈ ಸಾಧನೆ ಎಸ್‌ಸಿಡಿಸಿಸಿ ಬ್ಯಾಂಕ್‌ನ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ, ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ಬ್ಯಾಂಕ್ ತನ್ನ ಕಾರ್ಯ ದಕ್ಷತೆಯನ್ನು ಮೆರೆದು, ಬ್ಯಾಂಕಿಂಗ್ ಸೇವೆಯಲ್ಲಿ ಅಪೂರ್ವ ದಾಖಲೆಯನ್ನು ನಿರ್ಮಿಸಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿದೆ. ವರದಿ ವರ್ಷದಲ್ಲಿ ರೂ.೧೦೧೦೦.೩೦ ಕೋಟಿ ರೂಪಾಯಿಗಳ ಒಟ್ಟು ವ್ಯವಹಾರ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ ಶೇ.೧೯.೩೦ ಏರಿಕೆಯನ್ನು ಕಂಡಿದೆ. ೨೦೨೧-೨೨ನೇ ಸಾಲಿಗೆ ರೂ.೧೧೦೦೦.೦೦ಕೋಟಿ ವ್ಯವಹಾರದ ಗುರಿಯನ್ನು ಬ್ಯಾಂಕ್ ಹೊಂದಿದೆ ಎಂದವರು ತಿಳಿಸಿದರು.

ರೂ.೪೯೪೮.೩೪ ಕೋಟಿ ಠೇವಣಿ

ಸಾಮಾನ್ಯವಾಗಿ ಠೇವಣಿಗಳ ಸಂಗ್ರಹಣೆಯಲ್ಲಿ ಎಲ್ಲಾ ಬ್ಯಾಂಕ್‌ಗಳಲ್ಲೂ ಸ್ಪರ್ಧೆ ಇದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದೇ ಠೇವಣಾತಿ ಇಲ್ಲದೆಯೂ ಬ್ಯಾಂಕ್‌ತನ್ನ ೧೦೫ ಶಾಖೆಗಳ ಮುಖಾಂತರ ೨೦೨೦-೨೧ನೇ ಸಾಲಿನಲ್ಲಿ ಒಟ್ಟು ರೂ.೪೯೪೮.೩೪ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ ಸಾಧನೆಗೈದಿದೆ. ಈ ಮೂಲಕ ಠೇವಣಿ ಸಂಗ್ರಹಣೆಯಲ್ಲಿ ರಾಜ್ಯದ ಇತರ ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿದೆ. ಕಳೆದ ಸಾಲಿನ ಠೇವಣಿ ಸಂಗ್ರಹಣೆಗಿಂತ ಈ ಬಾರಿ ಶೇ.೧೭.೬೫ ಏರಿಕೆಯಾಗಿದೆ.

ರೂ.೩೭೦೧.೪೭ ಕೋಟಿ ಮುಂಗಡ

ಸ್ಪರ್ಧಾತ್ಮಕ ಆರ್ಥಿಕ ಹಿನ್ನಡೆಯಲ್ಲಿಯೂ ಬ್ಯಾಂಕ್‌ರೂ.೩೭೧೨.೬೭ ಕೋಟಿ ಮುಂಗಡ ನೀಡಿದೆ. ಕೃಷಿ ಹಾಗೂ ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲವಾಗಿ ರೂ.೧೫೯೬.೦೪ ಕೋ.ರೂ., ಮಧ್ಯಮಾವಧಿ ಸಾಲ ರೂ.೧೨೯.೩೪ಕೋಟಿ ರೂಪಾಯಿ, ಹೀಗೆ ಕೃಷಿ ಕ್ಷೇತ್ರಕ್ಕೆ ಒಟ್ಟು ರೂ.೧೭೨೫.೩೮ ಕೋ.ರೂ ನೀಡಲಾಗಿದೆ. ಕೃಷಿ ಹಾಗೂ ಕೃಷಿಯೇತರ ಸಾಲಗಳ ಹೊರಬಾಕಿ ರೂ.೫೧೫೧.೯೬ ಕೋಟಿಯಾಗಿರುತ್ತದೆ ಎಂದು ರಾಜೇಂದ್ರ ಕುಮಾರ್ ವಿವರಿಸಿದರು.

ಸತತ ೨೬ ವರ್ಷಗಳಿಂದ ಕೃಷಿ ಸಾಲ ಮರುಪಾವತಿಯಲ್ಲಿ ಶೇಕಡಾ ೧೦೦ರ ಸಾಧನೆ ತೋರಿದೆ. ಬ್ಯಾಂಕ್ ವರದಿ ವರ್ಷದಲ್ಲಿ ನೀಡಿದ ಎಲ್ಲಾ ಕೃಷಿ ಸಾಲಗಳು ಶೇ.೧೦೦ರ ಮರುಪಾವತಿಯನ್ನು ಕಂಡು ದಾಖಲೆ ನಿರ್ಮಿಸಿದೆ. ಇಂತಹ ಸಾಧನೆಯನ್ನು ಕಳೆದ ೨೬ವರ್ಷಗಳಿಂದ ಸತತವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆಯಾಗಿದೆ ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಭಾಸ್ಕರ್ ಎಸ್. ಕೋಟ್ಯಾನ್, ವಾದಿರಾಜ ಎಂ.ಶೆಟ್ಟಿ, ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಲ್ಯೊಟ್ಟು, ರಾಜು ಎಸ್. ಪೂಜಾರಿ, ಹರೀಶ್ಚಂದ್ರ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಜೈ ರಾಜ್ ಬಿ. ರೈ, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ., ಮಹಾಪ್ರಬಂಧಕ ಗೋಪಿನಾಥ್ ಭಟ್ ಉಪಸ್ಥಿತರಿದ್ದರು.

((((ಬಾಕ್ಸ್ ))))

ಎಸ್‌ಸಿಡಿಸಿಸಿ ಬ್ಯಾಂಕಿನ ಸಾಧನೆ

* ೧,೧೯,೯೨೨೮ ಮಂದಿಗೆ ರುಪೇ ಕಿಸಾನ್ ಕಾರ್ಡ್

* ಜನರ ಬಳಿಗೆ ನಮ್ಮ ಬ್ಯಾಂಕ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ

* ೧೯ ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ, ೧೭ ಬಾರಿ ನಬಾರ್ಡ್ ಪ್ರಶಸ್ತಿ,

* ಸರ್ವಾಂಗೀಣ ಸಾಧನೆಗಾಗಿ ಬ್ಯಾಂಕೊ ಬ್ಲೂ ರಿಬ್ಬನ್ ಪ್ರಶಸ್ತಿ

* ಸತತ ೨ ವರ್ಷಗಳಿಂದ ಎಫ್‌ಸಿಬಿಎ ಪ್ರಶಸ್ತಿ

 

ಮುಂದಿನ ಯೋಜನೆಗಳು

* ಇಂಟರ್ ಬ್ಯಾಂಕ್ ಮೊಬೈಲ್ ಪೇಮೆಂಟ್ ಸಿಸ್ಟಮ್ ಯೋಜನೆ ಜಾರಿಗೆ ಚಿಂತನೆ

* ಶೀಘ್ರದಲ್ಲಿಯೇ ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆ ಆರಂಭ

* ಮುಂದಿನ ವರ್ಷ ೧೦ ಹೊಸ ಶಾಖೆಗಳನ್ನು ತೆರೆಯುವ ಗುರಿ

* ಸಿದ್ಧಾಪುರ ಶಾಖೆಗೆ ಹೊಸ ಕಟ್ಟಡ

*ಪ್ರತಿ ತಾಲೂಕಿಗೆ ಎಂಟಿಂ ಅಳವಡಿಕೆ,

* ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ಂ ಯೋಜನೆ ಜಾರಿ

Comments